ನಟ ರಿಷಬ್​ ಶೆಟ್ಟಿ (Rishab Shetty) ಅವರು ಸಿನಿಮಾದ ಬ್ಯುಸಿ ಕೆಲಸಗಳ ನಡುವೆ ಕುಟುಂಬಕ್ಕೆ ಸಮಯ ಕೊಡುವುದನ್ನು ಮಿಸ್​ ಮಾಡುವುದಿಲ್ಲ. ರಿಷಬ್​ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿಯ ಮುದ್ದಿನ ಮಗಳಾದ ರಾಧ್ಯ ಶೆಟ್ಟಿಯ ಮೊದಲ ವರ್ಷದ ಹುಟ್ಟುಹಬ್ಬವನ್ನು (Raadhya Shetty birthday) ಮಾರ್ಚ್​ 4ರಂದು ಆಚರಿಸಲಾಯಿತು. ಈ ಖುಷಿಯ ಕ್ಷಣದಲ್ಲಿ ಇಡೀ ಸ್ಯಾಂಡಲ್​ವುಡ್​ ಭಾಗಿ ಆಗಿತ್ತು ಎಂದರೂ ತಪ್ಪಿಲ್ಲ. ಬಹುತೇಕ ಎಲ್ಲ ಸ್ಟಾರ್​ ನಟ-ನಟಿಯರು ರಾಧ್ಯ ಶೆಟ್ಟಿ (Raadhya Shetty) ಬರ್ತ್​ಡೇ ಪಾರ್ಟಿಗೆ ಆಗಮಿಸಿದ್ದರು. ಆ ದಿನದ ಸಂಭ್ರಮ ಹೇಗಿತ್ತು ಎಂಬುದನ್ನು ತಿಳಿಸಲು ರಿಷಬ್​ ಶೆಟ್ಟಿ ಅವರು ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ರಾಧ್ಯ ಶೆಟ್ಟಿಗೆ ಶುಭ ಕೋರಿದ್ದಾರೆ.

2022ರ ಮಾರ್ಚ್​ 4ರಂದು ಪ್ರಗತಿ ಶೆಟ್ಟಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅದು ರಿಷಬ್​ ಶೆಟ್ಟಿ ಅವರ ಪಾಲಿಗೆ ಅದೃಷ್ಟದ ವರ್ಷ. ಮಗಳ ಆಗಮನದ ಜೊತೆಗೆ ಅದೇ ವರ್ಷ ‘ಕಾಂತಾರ’ ಚಿತ್ರ ಕೂಡ ತೆರೆಕಂಡು ಬ್ಲಾಕ್​ ಬಸ್ಟರ್​ ಹಿಟ್​ ಆಯಿತು. ಈಗ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ರಿಷಬ್​ ಶೆಟ್ಟಿ ಅವರು ಬಹಳ ಅದ್ದೂರಿಯಾಗಿ ಆಚರಿಸಿದ್ದಾರೆ. ಚಂದನವನದ ಗಣ್ಯಾತಿಗಣ್ಯರನ್ನೆಲ್ಲ ಆಹ್ವಾನಿಸಿ ರಿಷಬ್​ ಶೆಟ್ಟಿ ಔತಣ ನೀಡಿದ್ದಾರೆ.

 

ರವಿಚಂದ್ರನ್​, ಅಶ್ವಿನಿ ಪುನೀತ್​ ರಾಜ್​ಕುಮಾರ್​, ರಮೇಶ್​ ಅರವಿಂದ್​, ಗಣೇಶ್​, ವಿಜಯ್​ ಪ್ರಕಾಶ್​, ವಿಜಯ್​ ಕಿರಗಂದೂರು, ರಮ್ಯಾ, ಉಪೇಂದ್ರ, ಅಯ್ಯೋ ಶ್ರದ್ಧಾ, ಅವಿನಾಶ್​, ಮಾಳವಿಕಾ, ಸುಧಾರಾಣಿ, ಧ್ರುವ ಸರ್ಜಾ, ಸಂತೋಷ್​ ಆನಂದ್​ ರಾಮ್​, ಅರ್ಜುನ್​ ಸರ್ಜಾ, ಪವನ್​ ಕುಮಾರ್​, ಸಪ್ತಮಿ ಗೌಡ, ತಪಸ್ವಿನಿ, ರಚನಾ ಇಂದರ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಖುಷಿಗೆ ಸಾಕ್ಷಿಯಾದರು. ಡಿಕೆ ಶಿವಕುಮಾರ್​, ಸಿ.ಎನ್​. ಅಶ್ವತ್ಥ ನಾರಾಯಣ ಸೇರಿದಂತೆ ಕೆಲವು ರಾಜಕೀಯ ಮುಖಂಡರು ಕೂಡ ಭಾಗಿಯಾದರು.

‘ಕಾಂತಾರ 2’ ಚಿತ್ರಕ್ಕೆ ರಿಷಬ್​ ಶೆಟ್ಟಿ ತಯಾರಿ:

ದೇಶಾದ್ಯಂತ ಅಬ್ಬರಿಸಿದ ‘ಕಾಂತಾರ’ ಸಿನಿಮಾದಿಂದ ರಿಷಬ್​ ಶೆಟ್ಟಿ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ. ಅವರೀಗ ‘ಕಾಂತಾರ 2’ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ವರ್ಷ ಮಳೆಗಾಲದಲ್ಲಿ ಶೂಟಿಂಗ್ ಆರಂಭ ಆಗುವ ಸಾಧ್ಯತೆ ಇದೆ. ಇದು ಪ್ರೀಕ್ವೆಲ್​ ಆಗಿರಲಿದ್ದು, ರಿಷಬ್​ ಶೆಟ್ಟಿ ಅವರು ಯಾವ ಕಥೆ ಹೇಳಲಿದ್ದಾರೆ ಎಂಬ ಕೌತುಕ ಮೂಡಿದೆ. ಅಲ್ಲದೇ ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

Advertisement