ಕಳೆದ ಎರಡು ವಾರಗಳಿಂದ ಕನ್ನಡ ಚಲನಚಿತ್ರರಂಗದ ಮೇರುನಟರಲ್ಲಿ ಓರ್ವರಾದ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ವಿವಾಹದ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿದ್ದು, ಟ್ರೆಂಡಿಂಗ್‌ನಲ್ಲಿವೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ಮದುವೆ ಹಾಗೂ ಆರತಕ್ಷತೆ ಮತ್ತು ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಅಭಿ‍ಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಕುಟುಂಬಸ್ಥರು ಈ ಎಲ್ಲಾ ಕಾರ್ಯಕ್ರಮವನ್ನೂ ಸಹ ಬಹಳ ವಿಜೃಂಭಣೆಯಿಂದ ಮಾಡಿ ಮುಗಿಸಿದರು.

ಇನ್ನು ಈ ಕಾರ್ಯಕ್ರಮಗಳೆಲ್ಲಾ ಮುಗಿದ ಬಳಿಕ ಸುಮಲತಾ ಅಂಬರೀಶ್ ಮಂಡ್ಯದ ಜನತೆಗೆ ತಮ್ಮ ಮಗನ ಮದುವೆಯ ಖುಷಿಯನ್ನು ಔತಣಕೂಟದ ಮೂಲಕ ಹಂಚಬೇಕು ಎಂಬ ಯೋಜನೆಯಿಂದ ಮಂಡ್ಯ ಜಿಲ್ಲೆಯಲ್ಲಿಯೇ ಬೀಗರ ಔತಣ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಅದರಂತೆ ನಿನ್ನೆ ( ಜೂನ್ 16 ) ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಸಮೀಪ 15 ಎಕರೆ ಪ್ರದೇಶದಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರ ಬೀಗರ ಔತಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 7 ಟನ್ ಮಟನ್ ಹಾಗೂ 8 ಟನ್ ಚಿಕನ್ ಬಳಸಿ ವಿವಿಧ ಖಾದ್ಯಗಳನ್ನು ತಮ್ಮ ಅಭಿಮಾನಿಗಳಿಗೆ ಬಡಿಸಲು ಅಂಬಿ ಕುಟುಂಬಸ್ಥರು ಯೋಜನೆ ಹಾಕಿಕೊಂಡಿದ್ರು. ಸುಮಾರು 50000 ಜನರು ಸೇರುವ ನಿರೀಕ್ಷೆ ಸಹ ಇತ್ತು.

ಆದರೆ ಕಾರ್ಯಕ್ರಮ ಆರಂಭವಾದ ಕೆಲ ಗಂಟೆಗಳಲ್ಲಿಯೇ ಅಭಿಮಾನಿಗಳು ಅಲ್ಲಿನ ಅಡುಗೆ ಮನೆಗೆ ನುಗ್ಗಿಬಿಟ್ಟಿದ್ದರು. ಊಟ ಖಾಲಿಯಾಗಿದೆ ಎಂಬ ಕಾರಣಕ್ಕೆ ಈ ರೀತಿಯ ಘಟನೆ ನಡೆದಿತ್ತು. ಊಟ ಖಾಲಿಯಾಗ್ತಿದೆಯಂತೆ ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಅಡುಗೆ ಮನೆಯತ್ತ ಹೆಚ್ಚಿನ ಜನರು ಧಾವಿಸಿದ ಕಾರಣ ನೂಕುನುಗ್ಗಲು ಉಂಟಾಗಿ ಪೊಲೀಸರು ಲಘು ಲಾಠಿ ಪ್ರಹಾರ ಸಹ ಮಾಡಿದರು.

ಕಾರ್ಯಕ್ರಮಕ್ಕೆ ಬಂದಿದ್ದ ಅಭಿಮಾನಿಗಳು ಆಯೋಜನೆ ಸರಿ ಇಲ್ಲ, ಈ ರೀತಿ ಮಾಡೋಕೆ ಯಾಕೆ ಆಹ್ವಾನ ನೀಡಬೇಕಿತ್ತು ಎಂದು ಬೇಸರ ಹೊರಹಾಕಿದ್ರು. ಇನ್ನು ಈ ಕುರಿತ ಹಲವಾರು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಸುದ್ದಿ ವಾಹಿನಿಗಳಲ್ಲಿ ಹರಿದಾಡಿದವು.

ಹೀಗೆ ಇಷ್ಟೆಲ್ಲಾ ನಡೆದ ಬಳಿಕ ಕಾರ್ಯಕ್ರಮದ ನಂತರ ಸುದ್ದಿಗೋಷ್ಟಿ ನಡೆಸಿದ ಅಭಿಷೇಕ್ ಅಂಬರೀಶ್ ಘಟನೆ ಕುರಿತು ಮಾತನಾಡಿದರು. ಊಟದ ಕೊರತೆಯಿತ್ತು ಎಂಬ ಆರೋಪವನ್ನು ತಳ್ಳಿಹಾಕಿದ ಅಭಿಷೇಕ್ ಅಂಬರೀಶ್ ಅಭಿಮಾನಿಗಳಲ್ಲಿ ಕೈಮುಗಿದು ಕ್ಷಮೆಯನ್ನೂ ಕೇಳಿದ್ರು.

“ಊಟದ ಕೊರತೆ ಇದೆ ಅಂತ ಹರಿದಾಡಿದ ಸುದ್ದಿ ಸುಳ್ಳು. ಅಲ್ಲಿ ಏನಾಗಿತ್ತು, ಹೇಗಾಗಿತ್ತು ಎಂಬುದು ನನಗೂ ಪೂರ್ತಿ ಗೊತ್ತಿಲ್ಲ. ನಾನು ಯಾವತ್ತೂ ಜನರ ವಿರುದ್ಧ ಮಾತನಾಡಲ್ಲ. ಯಾಕಂದರೆ ಎಲ್ರೂ ಪ್ರೀತಿ ವಿಶ್ವಾಸದಿಂದ ಬಂದಿರೋರು. ಯಾರಿಗೂ ದುಡ್ಡು ಕೊಟ್ಟೇನೂ ಕರೆಸಿಲ್ಲ. ಆಹ್ವಾನ ನೀಡಿದ ಕೂಡಲೇ ಅಂಬರೀಶಣ್ಣನ ಮಗನಿಗೆ ಆಶೀರ್ವದಿಸಬೇಕು ಅಂತ ಬಂದಿದಾರೆ. ಇಂತಹ ದೊಡ್ಡ ಕಾರ್ಯಕ್ರಮದಲ್ಲಿ ಎಲ್ಲೋ ಒಂದು ಕಡೆ ಐದು ನಿಮಿಷ ತಡ ಆಗಿದೆ. ನನಗೆ ಬಂದಿರೋ ಪ್ರಕಾರ ಕೆಲವರು ಅಲ್ಲಿ ಕುಳಿತಿದ್ದ ಜನಕ್ಕೆ ಪ್ರಚೋದನೆ ಮಾಡಿದ್ದಾರೆ. ಬಿಸಿಲಲ್ಲಿ ಕುಳಿತಿದ್ದ ಜನರು ಸಾಮಾನ್ಯವಾಗಿ ಈ ಪ್ರಚೋದನೆಯಿಂದ ಅಡುಗೆ ಮನೆಗೆ ನುಗ್ಗಿದ್ದಾರೆ. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲಾಗದೇ ಪೊಲೀಸರು ಸಹ ಕಷ್ಟಪಟ್ಟಿದ್ದಾರೆ. ಹೀಗೆ ಜನರು ಅಡುಗೆ ಮನೆಗೆ ನುಗ್ಗಿದಾಗ ಅಲ್ಲಿನ ಅಡುಗೆಯವರು ಗಾಬರಿಯಾಗಿದ್ದಾರೆ ಹಾಗೂ ಮತ್ತೆ ಬಡಿಸೋಕೆ ಆಗಿಲ್ಲ. ಯಾರೋ ಮಾಡಿದ ಪ್ರಚೋದನೆಯಿಂದ ಇಷ್ಟೆಲ್ಲಾ ಆಗಿದೆ. ಎಷ್ಟೇ ಕಾರಣ ಕೊಟ್ರೂನೂ ಕೊನೆಗೆ ಇದಕ್ಕೆಲ್ಲಾ ನಾನೇ ಜವಾಬ್ದಾರಿ. ಪ್ರೀತಿ ವಿಶ್ವಾಸದಿಂದ ಅಷ್ಟು ಜನ ಬಂದಿದ್ದೀರ. ನಮ್ಮ ಕಡೆಯಿಂದ ಯಾವುದಾದರೂ ತಪ್ಪಾಗಿದ್ರೆ ದಯವಿಟ್ಟು ಕ್ಷಮಿಸಿ. ನಿಮ್ಮನ್ನು ಕರೆಸಿ ಊಟ ಇಲ್ಲದೇ ಕಳುಹಿಸಬೇಕು ಎಂಬ ಉದ್ದೇಶದಿಂದ ಆಹ್ವಾನಿಸಿರಲಿಲ್ಲ. ಎಲ್ರೂ ಊಟ ಮಾಡಲಿ ಎಂಬ ಉದ್ದೇಶದಿಂದ ನಾವೂ ಯೋಜನೆ ಮಾಡಿದ್ವಿ. ನಮಗೂ ಇದು ಮೊದಲ ಸಾರಿ, ಕೆಲವೊಮ್ಮೆ ಹೀಗೆ ಆಗುತ್ತೆ. ಇದರಲ್ಲಿ ಯಾರದ್ದೂ ತಪ್ಪಿಲ್ಲ. ಕೆಲವೊಮ್ಮೆ ಹೀಗೆ ಆಗುತ್ತೆ. ಮತ್ತೊಮ್ಮೆ ಕೇಳಿಕೊಳ್ತೇನೆ ಕ್ಷಮಿಸಿ” ಎಂದು ಕೇಳಿಕೊಂಡರು.

 

ಇನ್ನು ಯಾರೋ ಪ್ರಚೋದನೆ ಮಾಡಿದ್ರು ಎಂಬ ಹೇಳಿಕೆಗೆ ಮಾಧ್ಯಮದವರು ಈ ಪ್ರಚೋದನೆಯ ಹಿಂದೆ ರಾಜಕೀಯ ಇರಬಹುದಾ ಎಂಬ ಪ್ರಶ್ನೆ ಕೇಳಿದ್ರು. ಇದಕ್ಕೆ ಉತ್ತರಿಸಿದ “ಅದರ ಕುರಿತು ಯೋಚಿಸುತ್ತಾ ಹೋದ್ರೆ ಒಂದು ಷಡ್ಯಂತ್ರ ನಡೆಯಿತು ಎಂದು ಹೇಳಬಹುದು. ಆದರೆ ನಾನು ಹೇಳೋಕೆ ಹೋಗಲ್ಲ. ಯಾಕೆಂದರೆ ಇದು ರಾಜಕೀಯ ಕಾರ್ಯಕ್ರಮವಲ್ಲ. ಜನರೂ ರಾಜಕೀಯ ಮರೆತು ಪ್ರೀತಿಯಿಂದ ಬಂದಿದ್ದಾರೆ. ಆದರೆ ಇದರಿಂದ ಕೆಲವರಿಗೆ ಖುಷಿಯಾಗುತ್ತೆ. ಅವರು ಇದನ್ನೇ ಮದುವೆ ಗಿಫ್ಟ್ ಎಂದುಕೊಳ್ಳಲಿ” ಎಂದರು.

Advertisement