ನವದೆಹಲಿ: ಜಗತ್ತಿನ ಜನರು ಹುಬ್ಬೇರಿಸಿ ನೋಡುವಂತ ನಿರ್ಧಾರ ತೆಗೆದುಕೊಂಡಿದ್ದ ಕೇರಳದ (Kerala) ಮಲಪ್ಪುರಂ ಜಿಲ್ಲೆಯ ವಲಂಚೇರಿ ಮೂಲದ ಶಿಹಾಬ್ ಚೋಟ್ಟೂರ್ (Shihab Chottur) ಕಾಲ್ನಡಿಗೆಯಲ್ಲಿಯೇ ಯಶಸ್ವಿಯಾಗಿ ಮೆಕ್ಕಾ (Mecca) ತಲುಪಿದ್ದಾರೆ. 2022ರ ಜೂನ್ 2 ರಂದು ಕಾಲ್ನಡಿಗೆ ಮೂಲಕ ಯಾತ್ರೆ ಕೈಗೊಂಡಿದ್ದ ಅವರು ಮದೀನಾ ಮೂಲಕ ಈಗ ಮೆಕ್ಕಾ ತಲುಪಿದ್ದಾರೆ.

ಶಿಹಾಬ್ ಕೇರಳದಿಂದ ಕಾಲ್ನಡಿಗೆ ಆರಂಭಿಸಿ ಪಾಕಿಸ್ತಾನ, ಇರಾನ್, ಇರಾಕ್ ಮತ್ತು ಕುವೈತ್ ಅನ್ನು ಕ್ರಮಿಸಿ, ಮೇ ಎರಡನೇ ವಾರದಲ್ಲಿ ಕುವೈತ್‌ನಿಂದ ಸೌದಿ ಅರೇಬಿಯಾದ ಗಡಿಯನ್ನು ದಾಟಿದರು. ಸೌದಿ ಅರೇಬಿಯಾವನ್ನು ಪ್ರವೇಶಿಸಿದ ನಂತರ ಶಿಹಾಬ್ ಪ್ರಮುಖ ಇಸ್ಲಾಮಿಕ್ ಯಾತ್ರಾ ಸ್ಥಳವಾದ ಮದೀನಾಕ್ಕೆ ತಲುಪಿ 21 ದಿನಗಳ ಕಾಲ ತಂಗಿ ಬಳಿಕ ಮೆಕ್ಕಾ ತಲುಪಿದ್ದಾರೆ.

ಶಿಹಾಬ್ ಚೋಟ್ಟೂರ್ ಈ ಪ್ರಯಾಣ ಪೂರ್ಣಗೊಳಿಸಲು 370 ದಿನಗಳನ್ನು ತೆಗೆದುಕೊಂಡಿದ್ದು, 8640 ಕಿ.ಮೀ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದಾರೆ. ಈ ಹಂತದಲ್ಲಿ ಅವರು ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಶಿಹಾಬ್ ವಾಘಾ ಗಡಿಯನ್ನು ತಲುಪುವ ಮೊದಲು ದೇಶದ ಹಲವಾರು ರಾಜ್ಯಗಳ ಮೂಲಕ ನಡೆದು ಪಾಕಿಸ್ತಾನವನ್ನು ಪ್ರವೇಶಿಸಲು ಬಯಸಿದ್ದರು.

ಶಿಹಾಬ್ ವೀಸಾ ಹೊಂದಿಲ್ಲದ ಕಾರಣ ಪಾಕಿಸ್ತಾನದ ವಲಸೆ ಅಧಿಕಾರಿಗಳು ಅವರನ್ನು ತಡೆದರು. ಟ್ರಾನ್ಸಿಟ್ ವೀಸಾ ಪಡೆಯಲು ವಾಘಾದ ಶಾಲೆಯೊಂದರಲ್ಲಿ ತಿಂಗಳುಗಟ್ಟಲೆ ಕಾದ ಬಳಿಕ ಅಂತಿಮವಾಗಿ ವೀಸಾ ಪಡೆಯುವಲ್ಲಿ ಸಫಲರಾದರು. ಬಳಿಕ ಪಾಕಿಸ್ತಾನ ತಲುಪಿದ ಅವರು 4 ತಿಂಗಳ ನಂತರ ಹಜ್ ಯಾತ್ರೆಗಾಗಿ ಶಿಹಾಬ್ ಚೋಟ್ಟೂರ್ ತಮ್ಮ ಗಮ್ಯಸ್ಥಾನವನ್ನು ತಲುಪಿದರು.

Advertisement